ಹಾಸನ: ಜಿಲ್ಲೆಯ ಶಕ್ತಿದೇವತೆ, ಹಾಸನಾಂಬ ದರ್ಶನೋತ್ಸವಕ್ಕೆ ಗುರುವಾರ ತೆರೆ ಬಿದ್ದಿತು. ಮಧ್ಯಾಹ್ನ 1.07ಕ್ಕೆ ಸಕಲ ವಿಧಿವಿಧಾನಗಳೊಂದಿಗೆ ಹಾಸನಾಂಬ ದೇಗುಲದ ಗರ್ಭಗುಡಿಯ ಬಾಗಿಲು ಬಂದ್ ಮಾಡಲಾಯಿತು.
ಸಂಪ್ರದಾಯದಂತೆ ಪೂಜೆ, ನೈವೇದ್ಯ ಸಲ್ಲಿಸಿ ನಂದಾದೀಪ ಹಚ್ಚಿಟ್ಟ ಅರ್ಚಕರು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಿ ಕೀಲಿಯನ್ನು ದೇವಾಲಯದ ಆಡಳಿತಾಧಿಕಾರಿಗೆ ಹಸ್ತಾಂತರಿಸಿದರು.
ಈ ಬಾರಿ 26 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಟಿಕೆಟ್, ಲಡ್ಡುಪ‍್ರಸಾದ ಮಾರಾಟದಿಂದ ₹ 21.82 ಕೋಟಿ ಆದಾಯ ಸಂಗ್ರಹವಾಗಿದೆ.
ಮುಂದಿನ ವರ್ಷ ಅ.29ರಿಂದ ನ.11ರವರೆಗೆ ಹಾಸನಾಂಬ ದೇಗುಲದ ಬಾಗಿಲು ತೆರೆಯಲಿದ್ದು, ಭಕ್ತರಿಗೆ ದರ್ಶನ ಲಭ್ಯವಾಗಲಿದೆ.
ಗರ್ಭಗುಡಿಯ ಬಾಗಿಲು ಮುಚ್ಚುವುದಕ್ಕೂ ಮುನ್ನ ಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ಸಂಭ್ರಮದಿಂದ ನೆರವೇರಿತು. ಜಿಲ್ಲಾಧಿಕಾರಿ ಲತಾಕುಮಾರಿ ಅವರು ಕೆಂಡ ಹಾಯ್ದು ಗಮನಸೆಳೆದರು.
ಬಳಿಕ ಮಾತನಾಡಿದ ಅವರು, ‘ಕಳಸ ಹೊತ್ತ ಭಕ್ತರು ಕೆಂಡ ಹಾಯ್ದದ್ದು ನೋಡಿ ನನಗೂ ಇಂಗಿತ ಬಂತು. ಮೊದಲು ಭಯವಾಯಿತು, ನಂತರ ಭಕ್ತಿಯಿಂದ ಕೈ ಮುಗಿದು ಹೋದೆ. ಏನೂ ಆಗಲಿಲ್ಲ’ ಎಂದು ಅನುಭವ ಹಂಚಿಕೊಂಡರು.
Hassanamba Darshan Festival opens
