ಚಿಕ್ಕಮಗಳೂರು: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ತಲೆ ಉಳಿಸಿಕೊಳ್ಳಲು ಪೊಲೀಸರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮ ಆಯೋಜನೆ ಮಾಡಿದ್ದವರು ಹಾಗೂ ಆಮಂತ್ರಿಸಿದವರ ತಲೆದಂಡವಾಗಬೇಕು. ಪೊಲೀಸ್ ಕಮಿಷನರ್ ತಲೆದಂಡವಾಗಿದೆ ಎಂದರೆ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಪೊಲೀಸ್ ಕಮಿಷನರ್ ಅವರೇ? ಎಂದು ಪ್ರಶ್ನಿಸಿದರು.
ನನಗೆ ಇರುವ ಮಾಹಿತಿ ಪ್ರಕಾರ ಪೊಲೀಸರು ಕಾರ್ಯಕ್ರಮ ಆಯೋಜನೆ ಮಾಡುವುದು ಬೇಡ ಎಂದು ಹೇಳಿದ್ದರು. ಆದರೆ ಸಿಎಂ ಹಾಗೂ ಡಿಸಿಎಂ ಪೊಲೀಸರ ಮೇಲೆ ದಬ್ಬಾಳಿಕೆ ಮಾಡಿ ಏನಾಗುವುದಿಲ್ಲ ಕಾರ್ಯಕ್ರಮ ಮಾಡಿ ಎಂದು ಆಯೋಜಿಸಿದ್ದಾರೆ. ಆದರೆ ಇದೀಗ ಕಾರ್ಯಕ್ರಮ ಮಾಡುವುದು ಬೇಡ ಎಂದಿದ್ದ ಪೊಲೀಸರನ್ನೇ ತಲೆ ತಂಡ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಹಾಗೂ ಡಿಸಿಎಂ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗಾಗಿ ಕಾರ್ಯಕ್ರಮ ಮಾಡಿ ಇದೀಗ ತಮ್ಮ ತಲೆ ಉಳಿಸಿಕೊಳ್ಳಲು ಸಣ್ಣವರನ್ನು ಬಲಿ ಪಡೆಯುತ್ತಿದ್ದಾರೆ. ಸಿಎಂ ಡಿಪಿಎಂ ಹಾಗೂ ಕಾರ್ಯದರ್ಶಿ ಬಿಟ್ಟು ಬೇರೆಯವರಿಗೆ ವಿಧಾನಸೌಧದಲ್ಲಿ ಕಾರ್ಯಕ್ರಮದ ನಿರ್ಧಾರ ಮಾಡುವ ಅವಕಾಶವಿಲ್ಲ. ವಿಧಾನಸೌಧದ ಮುಂದೆ ಚಪ್ಪಲಿ ರಾಶಿ ನೋಡಿದ ಮೇಲೆಯಾದರೂ ಮುಂದಾಗಬಹುದಾಗಿದ್ದ ಸಾವುಗಳನ್ನು ತಪ್ಪಿಸಬಹುದಿತ್ತು. ಇಲ್ಲಿಯೂ ಸರ್ಕಾರ ವಿಫಲವಾಗಿದೆ. ಹೀಗಾಗಿ ಉಚ್ಛ ನ್ಯಾಯಾಲಯದ ಹಾಲಿ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಆರ್ ಸಿಬಿ ಹೂಡಿಕೆದಾರರು ಯಾರು? ಸಿಎಂ ಸಿದ್ದರಾಮಯ್ಯನವರೇ? ಡಿಸಿಎಂ ಡಿಕೆ ಶಿವಕುಮಾರ್ ಅವರೇ? ಅಥವಾ ಸರ್ಕಾರವೇ? ಎಂದು ಪ್ರಶ್ನಿಸಿದರು.
ಐಪಿಎಲ್ ನಲ್ಲಿ ಆರ್‌ಸಿಬಿ ತಂಡ ಜಯಗಳಿಸಿದ ಬಳಿಕ ಸಿಎಂ ಹಾಗೂ ಡಿಸಿಎಂ ತಾವೇ ಹೂಡಿಕೆದಾರರೇನೋ ಎಂಬಂತೆ ಸಂಭ್ರಮಿಸಿದ್ದಾರೆ. ಹೀಗಾಗಿ ಆರ್‌ಸಿಬಿಯ ನಿಜವಾದ ಹೂಡಿಕೆದಾರರು ಯಾರು ಎಂದು ಸ್ಪಷ್ಟಪಡಿಸಬೇಕು ಎಂದರು.
ಐಪಿಎಲ್ ಎನ್ನುವುದು ಇತ್ತೀಚಿನ ವರ್ಷದ ಹೊಸ ಕಮರ್ಷಿಯಲ್ ಟ್ರೆಂಡ್. ಐಪಿಎಲ್ ನಲ್ಲಿ ರಾಷ್ಟ್ರೀಯತೆ ಅಥವಾ ಪ್ರಾದೇಶಿಕತೆ ಎರಡು ಇಲ್ಲ ಎಂದು ಹೇಳಿದರು.
ಬೆಂಗಳೂರು ಕಾಲ್ತುಡಿತ ಪ್ರಕರಣದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹಾಕಿರುವ ಕಣ್ಣೀರು ಪಶ್ಚಾತಾಪದ ಕಣ್ಣೀರಾ?, ಮಾನವೀಯತೆಯ ನೆಲೆಯಲ್ಲಿ ಬಂದ ಕಣ್ಣೀರಾ?. ನಾನು ಡಿ.ಕೆ.ಶಿವಕುಮಾರ್ ಹಾಕಿರುವ ಕಣ್ಣೀರು ನಾಟಕ ಎಂದು ಹೇಳುವುದಿಲ್ಲ. ಅದನ್ನು ಅವರ ಆತ್ಮಸಾಕ್ಷಿಗೆ ಬಿಡುತ್ತೇನೆ ಎಂದು ತಿಳಿಸಿದರು.
ಕಾಲ್ತುಳಿತದಲ್ಲಿ ಸಾವು ನೋವು ಸಂಭವಿಸಿರುವ ಸುದ್ದಿ ಬಂದಾಗಲು ಗೆಲುವನ್ನು ಸಂಭ್ರಮಿಸುತ್ತಿದ್ದಿರಿ. ಈ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡುತ್ತಿರುವಾಗ ಕಣ್ಣೀರಿಗೆ ಅರ್ಥವೇನು?. ಇಲ್ಲಿ ಎಲ್ಲರನ್ನೂ ಮೆಚ್ಚಿಸಬಹುದು. ಆದರೆ ಪರಮೇಶ್ವರನನ್ನು ಮೆಚ್ಚಿಸಲು ಸಾಧ್ಯವಿಲ್ಲ. ಆತ ಪಕ್ಕಾ ಲೆಕ್ಕ ಬರೆದಿರುತ್ತಾನೆ ಎಂದು ಹೇಳಿದರು.
Police sacrifice to save their own lives
