October 26, 2025
Suddigaralive News
ರಾಜ್ಯ

ಸತ್ಯಸಾಯಿ ಗ್ರಾಮದಲ್ಲಿ ಶೀಘ್ರ ಯಕ್ಷಗಾನ, ಜಾನಪದ ರಂಗಕಲೆ ಕಲಿಯಲು ಅವಕಾಶ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿರುವ ‘ನಾದ ಗುರುಕುಲಂ’ನಲ್ಲಿ ಯಕ್ಷಗಾನ ಮತ್ತು ಜಾನಪದ ರಂಗಕಲೆಗಳ ಅಭ್ಯಾಸಕ್ಕೂ ಅವಕಾಶ ಇರಲಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು. ನವರಾತ್ರಿ ಪ್ರಯುಕ್ತ ಬೆಂಗಳೂರಿನ ‘ಕಲಾ ಕದಂಬ ಆರ್ಟ್‌ ಸೆಂಟರ್‌’ನ ಕಲಾವಿದರು ಮಂಗಳವಾರ (ಸೆ 23) ನಡೆಸಿಕೊಟ್ಟ ‘ಮಹಿಷಾಸುರ ಮರ್ದಿನಿ’ ಯಕ್ಷಗಾನ ಮತ್ತು ಜಾನಪದ ಕಲೆಗಳ ಪ್ರದರ್ಶನದ ನಂತರ ಅವರು ಆಶೀರ್ವಚನ ನೀಡಿದರು.

ನಮ್ಮ ಪುರಾಣಗಳು ಮತ್ತು ಇತರ ಮೌಲಿಕ ಜಾನಪದ ಕಥೆಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಅಪರೂಪದ ಕಲೆ ಯಕ್ಷಗಾನ. ಡೊಳ್ಳು ಕುಣಿತ, ಪೂಜಾ ಕುಣಿತಗಳು ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಹಬ್ಬದ ವೈಖರಿಯನ್ನು ಬಿಂಬಿಸುತ್ತವೆ. ಕರ್ನಾಟಕದ ಶ್ರೀಮಂತ ಗ್ರಾಮೀಣ ಬದುಕಿನ ಇಣುಕುನೋಟವನ್ನು ಈ ಪ್ರದರ್ಶನಗಳು ನೀಡಿದವು. ನಮ್ಮನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದಿದ್ದವು ಎಂದರು.

ವಿವಿಧ ಕಲಾವಿದರು ಯಕ್ಷಗಾನ, ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ಬೇಡರ ವೇಷ ಮತ್ತು ತಮಟೆ ಪ್ರದರ್ಶನ ನೀಡಿದರು. ಕರ್ನಾಟಕದ ನೆಲಮೂಲ ಸಂಸ್ಕೃತಿ ಬಿಂಬಿಸುವ ಹಲವು ಜಾನಪದ ಕಲೆಗಳು ಸಭಿಕರ ಮನಸೂರೆಗೊಂಡವು. ಕಲಾ ಕದಂಬ ಆರ್ಟ್‌ ಸೆಂಟರ್‌’ನ ನಿರ್ದೇಶಕ ರಾಧಾಕೃಷ್ಣ ಉರಾಳ ಸೇರಿದಂತೆ ಎಲ್ಲ ಕಲಾವಿದರಿಗೂ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಎರಡನೇ ದಿನವಾದ ಮಂಗಳವಾರ ವೇದಮಂತ್ರ ಪಾರಾಯಣದೊಂದಿಗೆ 121 ಪುರೋಹಿತರು ಅತಿರುದ್ರ ಮಹಾ ಯಜ್ಞವನ್ನು ಮುಂದುವರಿಸಿದರು. ದುರ್ಗಾದೇವಿಯ ಎರಡನೇ ರೂಪವಾದ ಬ್ರಹ್ಮಚಾರಿಣಿಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ವೈಭವದಿಂದ ಪೂಜಿಸಲಾಯಿತು. ವಿವಿಧ ಬಣ್ಣಗಳ ಹೂವುಗಳಿಂದ ಅಲಂಕೃತಗೊಂಡಿದ್ದ ದೇವಿ ಭಕ್ತರ ಕಣ್ಮನ ಸೆಳೆದಳು. ದೇವಿ ಮತ್ತು ಗಣಪತಿಯ ರಂಗೋಲಿ ಅತ್ಯಾಕರ್ಷಕವಾಗಿ ಕಂಡಿತು.

ಸದ್ಗುರು ಶ್ರೀ ಮಧುಸೂದನ ಸಾಯಿ ಆಶೀರ್ವಚನ ನೀಡಿ, ದೇವರ ಅನುಗ್ರಹವಿಲ್ಲದೆ ನಾವು ಏನೂ ಸಾಧಿಸಲು ಸಾಧ್ಯವಿಲ್ಲ. ನಾವು ಎಷ್ಟೇ ಬುದ್ಧಿವಂತರಾಗಿರಹುದು, ಎಷ್ಟೇ ಸಮರ್ಥರಾಗಿದ್ದೇವೆ ಎಂದು ಭಾವಿಸಬಹುದು. ಆದರೆ ದೈವೀ ಅನುಗ್ರಹವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಇದೆಲ್ಲವೂ ದೇವರ ಅನುಗ್ರಹದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.

ಮನುಷ್ಯರಲ್ಲಿ ಅಹಂಕಾರ ನಿಸರ್ಗ ಸಹಜವಾದುದು. ಅಹಂಕಾರ ಮತ್ತು ಮಮಕಾರವನ್ನು ಬಿಟ್ಟು ಶರಣಾಗಬೇಕು. ದೇವರ ಪೂಜೆ ಮತ್ತು ಸೇವೆಯ ಪ್ರಕ್ರಿಯೆಯಿಂದ ಅಂತಿಮವಾಗಿ ನಮ್ಮ ಮನಸ್ಸು ಶರಣಾಗಲು ಸಿದ್ಧವಾಗುವ ಹಂತವನ್ನು ತಲುಪುತ್ತದೆ. ಈ ಎಲ್ಲಾ ಆಚರಣೆಗಳು ಮನಸ್ಸನ್ನು ಶರಣಾಗತಿಗೆ ಸಿದ್ಧಪಡಿಸುತ್ತವೆ ಎಂದರು.

ಪ್ರತಿದಿನ ತಪ್ಪು ಮಾಡುತ್ತೇವೆ, ಪ್ರತಿ ದಿನ ಕ್ಷಮೆ ಕೇಳುತ್ತೇವೆ. ಅದು ಸರಿಯಲ್ಲ. ನಾವು ತಪ್ಪು ಮಾಡಬಾರದೆಂದು ಪ್ರಾರ್ಥಿಸಬೇಕು. ಕಲಿಯುವ ಯಾವುದೇ ವಿಷಯವು ನಮಗೆ ಮಾರ್ಗದರ್ಶನ ನೀಡಬೇಕು, ತಪ್ಪು ಪುನರಾವರ್ತನೆ ಆಗಬಾರದು. ಈ ಅದ್ಭುತವಾದ ಹಬ್ಬಗಳು ನಾವು ನಮ್ಮನ್ನು ಎಷ್ಟು ಅರ್ಪಿಸಿಕೊಂಡಿದ್ದೇವೆ ಎಂಬುದನ್ನು ಅಳೆಯಲು ಸಹಾಯ ಮಾಡುತ್ತವೆ. ನಮ್ಮ ಸ್ವಂತ ದೇವತೆಗೆ ಎಷ್ಟು ಹತ್ತಿರವಾಗಿದ್ದೇವೆ ಎಂಬುದನ್ನು ತಿಳಿಸುತ್ತದೆ. ಪ್ರತಿಯೊಂದು ಕೆಲಸಕ್ಕೂ ದೇವರ ಅನುಗ್ರಹ ಬೇಕು. ದೇವರ ಅನುಗ್ರಹವು ಶರಣಾದವರಿಗೆ ಮಾತ್ರವೇ ಸಿಗುತ್ತದೆ ಎಂದು ವಿವರಿಸಿದರು.

Opportunity to learn Yakshagana folk theatre soon in Sathya Sai Grama

Related posts

ರಾಜ್ಯ ಕೆರೆಗಳಿಗೆ ನೀರು ತುಂಬಿಸುವುದರಲ್ಲಿ ಏಷ್ಯಾದಲ್ಲೇ ಉತ್ತಮ‌ ಕಾರ್ಯ

Team Suddigara

ತಾವೇ ಹೆಚ್ಚಿಸಿದ್ದ ಜಿಎಸ್ ಟಿ ಯನ್ನು ಕಡಿತಗೊಳಿಸಿ ಕೇಂದ್ರಸರ್ಕಾರ ಬೆನ್ನು ತಟ್ಟಿಕೊಳ್ಳುತ್ತಿದೆ

Team Suddigara

ಬಹುತ್ವ ಸಂಸ್ಕೃತಿಯಲ್ಲಿ ಸರ್ಕಾರಕ್ಕೆ ಸ್ಪಷ್ಟ ಬದ್ಧತೆ ಇದೆ

Team Suddigara

Leave a Comment

[t4b-ticker] [t4b-ticker]