ಚಿಕ್ಕಮಗಳೂರು: ನಗರಕ್ಕೆ ಸುಮಾರು ೨೦ ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದರ ಕಾಮಗಾರಿ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸಿ ನೆರವೇರಿಸುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದರು.
ಅವರು ಇಂದು ದಂಟರಮಕ್ಕಿ ಸಮೀಪ ಹಾಗೂ ಪಾಲಿಟೆಕ್ನಿಕ್ ಮುಂಭಾಗದಲ್ಲಿ ತಲಾ ೧೨ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್ ತಂಗುದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ರಸ್ತೆ ಅಗಲೀಕರಣವಾದ ನಂತರ ಕೆ.ಎಂ ರಸ್ತೆಯಲ್ಲಿ ದಂಟರಮಕ್ಕಿ ಬಡಾವಣೆ ಸಮೀಪ ಚಿಕ್ಕಮಗಳೂರು, ಕಡೂರು ಮುಂತಾದ ಕಡೆ ಪ್ರಯಾಣ ಮಾಡುವ ಪ್ರಯಾಣಿಕರ ಅನುಕೂಲಕ್ಕಾಗಿ ಶಾಸಕರ ಅನುದಾನದಿಂದ ಹಣ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಕಣಿವೆ ರುದ್ರೇಶ್ವರ ದೇವಸ್ಥಾನದ ಬಳಿ ತಂಗುದಾಣ ನಿರ್ಮಾಣದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲೇ ಸಾರ್ವಜನಿಕ ಸಮರ್ಪಣೆ ಮಾಡುವುದಾಗಿ ತಿಳಿಸಿದ ಅವರು, ಅತ್ಯಾಧುನಿಕ ಬಸ್ ತಂಗುದಾಣವನ್ನು ಜರ್ಮನಿ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅಲ್ಲಿಂದಲೇ ಅದರ ಭಾವಚಿತ್ರ ತೆಗೆದು ಕೆಆರ್‌ಡಿಎಲ್ ಅಧಿಕಾರಿಗಳಿಗೆ ರವಾನಿಸಿರುವುದಾಗಿ ತಿಳಿಸಿದರು.
ಪ್ರವಾಸದ ಸಂದರ್ಭದಲ್ಲಿ ವಿಶೇಷವಾದವು ನಮ್ಮ ಕ್ಷೇತ್ರದಲ್ಲಿ ಇರಬೇಕೆಂಬುದು ಆಸೆ ಮತ್ತು ಕನಸಾಗಿತ್ತು. ಜನರ ಬೇಡಿಕೆಗನುಗುಣವಾಗಿ ಅವರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. ಈ ಬಸ್ ತಂಗುದಾಣಗಳನ್ನು ಈ ಭಾಗದ ಜನ ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿದರು.
ಗ್ಯಾರಂಟಿ ಯೋಜನೆಗಳ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಅನುದಾನ ನೀಡಲು ಬದ್ಧವಾಗಿದೆ. ಈಗಾಗಲೇ ರಸ್ತೆ ಅಭಿವೃದ್ಧಿಗೆ ೧೦ ಕೋಟಿ ರೂ ಮಂಜೂರಾಗಿದೆ. ಅಲ್ಪಸಂಖ್ಯಾತರು ವಾಸಿಸುವ ಬಡಾವಣೆಯ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ೫ ಕೋಟಿ ರೂ ಬಿಡುಗಡೆಯಾಗಿದ್ದು, ಸದ್ಯದಲ್ಲೇ ೨೫ ಕೋಟಿ ರೂ ವೆಚ್ಚದಲ್ಲಿ ನಗರವನ್ನು ಅಭಿವೃದ್ಧಿಪಡಿಸಿ ವಿರೋಧಿ ಹೇಳಿಕೆ ನೀಡುವವರಿಗೆ ಕೆಲಸದ ಮೂಲಕ ಉತ್ತರ ನೀಡುತ್ತೇವೆ ಎಂದರು.
ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಸಾರ್ವಜನಿಕರ ಬೇಡಿಕೆಯಂತೆ ಸುಸಜ್ಜಿತವಾದ ಅತ್ಯಾಧುನಿಕ ಬಸ್ ತಂಗುದಾಣ ನಿರ್ಮಾಣಕ್ಕೆ ಮುಂದಾಗಿರುವ ಶಾಸಕರನ್ನು ನಗರಸಭೆ ಪರವಾಗಿ ಅಭಿನಂದಿಸಿದರು. ಅ.೧೫ ರಂದು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಸುಮಾರು ೧.೨೫ ಕೋಟಿ ರೂ ವೆಚ್ಚದಲ್ಲಿ ನಗರದ ರಸ್ತೆಗಳನ್ನು ಡಾಂಬರೀಕರಣ ಮಾಡಲು ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾನಾಯ್ಕ್, ಸದಸ್ಯ ಗುರುಮಲ್ಲಪ್ಪ,ಮಂಜುಳ ಲಕ್ಷ್ಮಣ. ರಾಜು.ಲಕ್ಷ್ಮಣ. ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶ್‌ಸ್ವಾಮಿ, ಪೌರಾಯುಕ್ತ ಬಿ.ಸಿ ಬಸವರಾಜ್, ಕೆಆರ್‌ಡಿಎಲ್ ಎಇಇ ಸಂತೋಷ್, ಗ್ರಾಮಸ್ಥರುಗಳಾದ ಸ್ವಾಮಿ, ಭದ್ರೇಗೌಡ, ಬೀರೇಗೌಡ, ನಿಂಗೇಗೌಡ, ಜಗದೀಶ್, ಸಂದೀಪ್ ಉಪಸ್ಥಿತರಿದ್ದರು.
Construction of a well-equipped transport bus stand at a cost of Rs. 20 crore
