October 26, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

27.5 ಕೋಟಿ ರೂ.ವೆಚ್ಚದಲ್ಲಿ ನಗರದ ರಸ್ತೆಗಳ ಅಭಿವೃದ್ಧಿ

ಚಿಕ್ಕಮಗಳೂರು: ಮಳೆಯಿಂದಾಗಿ ಹದಗೆಟ್ಟಿರುವ ನಗರದ ರಸ್ತೆಗಳ ಅಭಿವೃದ್ಧಿಗೆ ೨೭.೫ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗಿದ್ದು, ಮಳೆ ನಿಂತ ಕೂಡಲೇ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಇಂಡಿಯನ್ ಐಸ್‌ಕ್ರೀಂ ಪಾರ್ಲರ್, ಮಲ್ಲಂದೂರು ರಸ್ತೆ, ವಿಜಯಪುರ ಹಾಗೂ ಹನುಮಂತಪ್ಪ ವೃತ್ತದಲ್ಲಿ ಇಂದು ಬೆಳಿಗ್ಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಹಾಗೂ ಈ ವರ್ಷ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ರಸ್ತೆಗಳು ಹೆಚ್ಚಾಗಿ ಗುಂಡಿ ಬಿದ್ದಿವೆ. ಜೊತೆಗೆ ಯು.ಜಿ.ಡಿ. ಹಾಗೂ ಅಮೃತ್ ಯೋಜನೆಯ ಕಾಮಗಾರಿಗಳಿಂದ ಕೂಡ ರಸ್ತೆಗಳು ಹಾನಿಗೊಳಗಾಗಿವೆ ಎಂಬ ದೂರುಗಳೂ ಕೇಳಿ ಬಂದಿವೆ ಎಂದರು.

ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರನ್ನು ತಾವು ಭೇಟಿ ಮಾಡಿ ಕೋರಿಕೆ ಸಲ್ಲಿಸಿದ ಮೇರೆಗೆ ನಗರಸಭೆಗೆ ವಿಶೇಷ ಅನುದಾನವನ್ನು ಒದಗಿಸಿದ್ದಾರೆ. ಎಸ್‌ಎಫ್‌ಸಿ ಯೋಜನೆಯಡಿ ೧೦ ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ನಿರ್ವಹಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ವಿಶೇಷ ಅನುದಾನದಲ್ಲಿ ಸಹ ೧೨.೫ ಕೋಟಿ ರೂ.ಗಳನ್ನು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಇಲಾಖೆಯಿಂದ ೫ ಕೋಟಿ ರೂ.ಗಳನ್ನು ಒದಗಿಸಿದ್ದು, ಒಟ್ಟು ೨೭.೫ ಕೋಟಿ ರೂ. ಲಭ್ಯವಿದ್ದು, ಈ ಮೊತ್ತವನ್ನು ವಿನಿಯೋಗಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸತತ ಮಳೆಯಿಂದಾಗಿ ರಸ್ತೆಗಳ ಹಾನಿ ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ ಅವರು, ಇದೇ ರೀತಿ ಪ್ರತೀ ತಿಂಗಳಿಗೊಮ್ಮೆ ಬಡಾವಣೆಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ಗಮನ ಹರಿಸಲು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದಿಂದ ಸ್ಪಂದಿಸುವ ಕಾರ್ಯವೂ ಇದರ ಜೊತೆಯಲ್ಲಿ ನಡೆಯಲಿದೆ. ಇದರ ಜೊತೆಗೆ ಪರಿಸರದ ಬಗ್ಗೆ ಹಾಗೂ ಸ್ವಚ್ಛತೆ ಬಗ್ಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ರೂಪಿಸಬೇಕೆಂಬ ಬಗ್ಗೆ ಅರಿವು ಮೂಡಿಸಲು ಸೈಕಲ್‌ನಲ್ಲಿ ನಗರ ಪ್ರದಕ್ಷಿಣೆ ಕೈಗೊಂಡಿರುವುದಾಗಿ ತಿಳಿಸಿದರು.

ನಗರದ ಇಂಡಿಯನ್ ಐಸ್‌ಕ್ರೀಂ ಪಾರ್ಲರ್ ಬಳಿ ಸೈಕಲ್‌ನಲ್ಲಿ ನಗರ ಪ್ರದಕ್ಷಿಣೆ ಕೈಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪರಿಸರವಾದಿ ಸ.ಗಿರಿಜಾಶಂಕರ ಮಾತನಾಡಿ, `ಸೈಕಲ್ ತುಳಿ, ಪರಿಸರ ತಿಳಿ’ ಕಾರ್ಯಕ್ರಮದಿಂದ ಗುಂಡಿಮಯ ರಸ್ತೆಗಳು, ಚರಂಡಿಗಳು ಸೇರಿದಂತೆ ವಿವಿಧ ಸಮಸ್ಯೆಗಳು ಗೋಚರವಾಗುತ್ತವೆ. ಈ ಪರಿಕಲ್ಪನೆ ಉತ್ತಮವಾಗಿದೆ ಎಂದು ಶ್ಲಾಘಿಸಿದರು.

ಮಧುವನ ಬಡಾವಣೆಯಲ್ಲಿ ಎರಡು ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯಬೇಕಿದೆ. ಈಗಾಗಲೇ ಸೌರ ದೀಪಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಪ್ರತೀ ವರ್ಷ ಕಳೆ ಕೀಳುವ ಕೆಲಸ ಬಡಾವಣೆಯ ನಿವಾಸಿಗಳಿಂದಲೇ ನಡೆಯುತ್ತಿದೆ. ಇಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ದೊಡ್ಡ ಕಾಲುವೆಯಿಂದ ಕಳೆಯನ್ನು ತೆರವುಗೊಳಿಸದೆ ಅದರಿಂದಾಗಿಯೇ ಬಹಳಷ್ಟು ಕಾಯಿಲೆಗಳಿಗೆ, ಸೊಳ್ಳೆ ಕಾಟಕ್ಕೆ ಕಾರಣವಾಗುತ್ತಿದೆ. ಕಸ ಎಸೆಯಲು ಕೂಡ ಬಳಕೆಯಾಗುತ್ತಿದೆ.

ಸಣ್ಣ ನೀರಾವರಿ ಇಲಾಖೆ ಈ ಕಾಲುವೆಯನ್ನು ಸುವ್ಯವಸ್ಥಿತಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಬಡಾವಣೆಯಲ್ಲಿ ಆಗಿಂದಾಗ್ಗೆ ವಿದ್ಯುತ್ ನಿಲುಗಡೆಯಾಗುತ್ತಿದೆ. ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ ಅವರು ಕಾರಣವನ್ನೇ ನೀಡುತ್ತಿಲ್ಲ. ಮೆಸ್ಕಾಂನವರು ವರ್ಷಕ್ಕೆ ಎರಡು ಬಾರಿಯಾದರೂ ಗ್ರಾಹಕರೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸುವುದು ಸೂಕ್ತ. ಆಗ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಮೆಸ್ಕಾಂ ಗ್ರಾಹಕ ಸ್ನೇಹಿಯಾಗಿ ಸ್ಪಂದಿಸುತ್ತಿಲ್ಲ. ಬಿಲ್ ಪಾವತಿಸದಿದ್ದರೆ ಸಂಪರ್ಕ ಸ್ಥಗಿತಗೊಳಿಸಲು ಮಾತ್ರ ಬರುತ್ತಿದ್ದಾರೆ ಎಂದು ಆರೋಪಿಸಿದರು.

ಸಾರ್ವಜನಿಕ ಇಲಾಖೆಗಳಲ್ಲಿ ಜನರಿಗೆ ಸ್ಪಂದಿಸುವ ಕಾರ್ಯ ನಡೆಯಬೇಕಿದೆ. ನಗರಸಭೆಯಿಂದ ವಾರಕ್ಕೆರಡು ಬಾರಿಯಾದರೂ ಕಸ ಗುಡಿಸುವ ಕಾರ್ಯ ನಡೆಯಬೇಕು. ಚರಂಡಿಗಳನ್ನು ಸುಸ್ಥಿತಿಗೊಳಿಸುವ ಕೆಲಸ ಮಾಡಬೇಕಿದೆ. ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಬೇಕು ಎಂದು ಗಮನ ಸೆಳೆದರು.

ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಮಧುವನ ಬಡಾವಣೆಯಲ್ಲಿ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಚರಂಡಿಗಳನ್ನು ಸುಸ್ಥಿತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿ ನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯರಾದ ಶಾದಾಬ್ ಆಲಂಖಾನ್, ಲಕ್ಷ್ಮಣ್, ಸಿಡಿಎ ಅಧ್ಯಕ್ಷ ನಯಾಜ್ ಅಹಮ್ಮದ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಾಲೂಕು ಸಮಿತಿ ಅಧ್ಯಕ್ಷ ಮಲ್ಲೇಶ್‌ಸ್ವಾಮಿ, ಸಿಡಿಎ ಆಯುಕ್ತೆ ನಾಗರತ್ನ, ತಹಸೀಲ್ದಾರ್ ರೇಷ್ಮಾಶೆಟ್ಟಿ, ಪೌರಾಯುಕ್ತ ಬಿ.ಸಿ.ಬಸವರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Development of city roads at a cost of Rs. 27.5 crore

Related posts

ದೆಹಲಿ ಗಣರಾಜ್ಯೋತ್ಸವದಲ್ಲಿ ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು ಸ್ತಬ್ಧಚಿತ್ರ

Team Suddigara

ಜೂ.18 ರಂದು ನಗರದಲ್ಲಿ ಸಿಪಿಐ ತಾಲೂಕು ಸಮ್ಮೇಳನ

Team Suddigara

ಬುಕ್ಕಾಂಬುಧಿ ಬೆಟ್ಟದಲ್ಲಿ ಅಮವಾಸ್ಯೆ ಪೂಜೆ

Team Suddigara

Leave a Comment

[t4b-ticker] [t4b-ticker]