ಚಿಕ್ಕಮಗಳೂರು: ಸಾಹಿತ್ಯ ಸಮ್ಮೇಳನ ಕೇವಲ ನುಡಿಜಾತ್ರೆಯಲ್ಲ. ನಿತ್ಯ ನಿರಂತರ ಮಹಿಳೆಯರಿಗೆ ಚಿಂತನೆಯ ದಾರಿಯಾಗಬೇಕು. ನಮ್ಮಿಂದ ಈ ಸಮಾಜಕ್ಕೆ ಒಳ್ಳೆದಾಗುವ ಬಗೆ ಹಾಗೂ ಯಾವ ದಾರಿಯಲ್ಲಿ ನಡೆಯಬೇಕು ಎಂಬುದರ ಬಗ್ಗೆ ಚರ್ಚಿಸಬೇಕು ಎಂದು ಸಮ್ಮೇಳನಾಧ್ಯಕ್ಷೆ ಲಕ್ಷ್ಮೀ ಶ್ಯಾಮರಾವ್ ತಿಳಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರಪ್ರಥಮ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷರಾಗಿ ಅವರು ಮಾತನಾಡಿದರು.
ಗೃಹಿಣಿ ಗೃಹ ಮುಚ್ಚತೆ ಎಂಬ ಮಾತಿನಂತೆ ವೃತ್ತಿನಿರತ ಮಹಿಳೆಯರು ಮನೆಯ ನಿರ್ವಹಣೆ ಮಾಡುತ್ತಾ ಇರುವ ಸಮಯವನ್ನೆ ದಿಟ್ಟತನದಿಂದ ಸಾಧನೆ ಮಾಡುವ ಮಹಿಳೆಯರು ಸಾಧಿಸಲು ಹೊರಟ ಮಹಿಳೆಯರು ಇಂದು ಭಾರತದ ಉದ್ದಗಲಕ್ಕೂ ಇದ್ದಾರೆನ್ನುವುದು ಸತ್ಯವಾಗಿದೆ ಎಂದರು.
ಪ್ರಾಚೀನ ಕಾಲದಿಂದಲೂ ಇಲ್ಲಿ ಮಹಿಳೆಯರು ಸ್ಥಾನಮಾನಕ್ಕೆ ಅಡ್ಡಿ ಆತಂಕಗಳು ಇದ್ದೇ ಇವೆ. ಮಹಿಳೆಯರ ಹಾದಿ ಅಷ್ಟೇನು ಸುಗಮ ಹಾದಿಯಲ್ಲ. ಇಲ್ಲಿ ಯಾವ ಯೋಜನೆಗಳು ಬಂದರೂ ಸಮಗ್ರವಾದ ಬದಲಾವಣೆ ಆಗುತ್ತಿಲ್ಲ. ಇಲ್ಲಿ ನಮ್ಮ ಹೋರಾಟವನ್ನು ಪುರುಷರ ವಿರುದ್ಧ ಎಂದುಕೊಳ್ಳದೆ ಮಹಿಳಾ ಶೋಷಣೆಯ ವಿರುದ್ಧ ಹೋರಾಟವೆಂದುಕೊಳ್ಳಬೇಕು ಎಂದರು.
ಹೆಣ್ಣು ಸಂಸಾರದ ಕಣ್ಣೆಂದರೂ ಅವಳ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ, ಅತ್ಯಾಚಾರ, ಭ್ರೂಣಹತ್ಯೆ, ಲೈಂಗಿಕ ಕಿರುಕುಳ, ಬಾಲ್ಯವಿವಾಹ ಇದರಂಥಹ ಸಾಮಾಜಿಕ ಪಿಡುಗಗಳು ಅವಳ ಜೀವನ ನರಕವಾಗದಂತೆ ಸಿಡಿದೇಳಬೇಕಾಗಿದೆ. ಮಹಿಳೆಯರು ಕಾನೂನುಗಳನ್ನು ಅರ್ಥಮಾಡಿಕೊಂಡು ದಿಟ್ಟತನದಿಂದ ಹೋರಾಡಬೇಕಿದೆ ಎಂದು ತಿಳಿಸಿದರು.
ಅಕ್ಷರ ಹಾದಿಯ ಬೆಳಕಿನಿಂದ ವಂಚಿತಳಾಗಿದ್ದ ಮಹಿಳೆಗೆ ಶತಮಾನಕ್ಕೂ ಮೀರಿದ ಹೋರಾಟದ ಫಲವಾಗಿ ಇಂದು ಶಿಕ್ಷಣದಲ್ಲಿ ಪಳಗಿ ಉದ್ಯೋಗದ ಅವಕಾಶಗಳು ಸಿಗುತ್ತಿವೆ. ಜಾಗತಿಕ ಮಟ್ಟದಲ್ಲಿ ಮಹಿಳೆಯರು ಕ್ರಿಯಾಶೀಲರಾಗಿದ್ದಾರೆ ಎಂದು ಹೇಳಿದರು.
ಸಾಹಿತ್ಯದ ವಿಷಯಕ್ಕೆ ಬಂದರೆ ಹಿಂದೆ ಅಡುಗೆಮನೆ ಸಾಹಿತ್ಯ ಎಂದು ಮಹಿಳಾ ಸಾಹಿತ್ಯವನ್ನು ಅಲ್ಲಗಳೆಯುತ್ತಿದ್ದರು. ಆದರೂ ಮಹಿಳೆಯರು ರಚಿಸಿದ ಸಾಹಿತ್ಯವನ್ನು ಓದಲು ಅಂದು ಓದುಗರ ಗುಂಪೇ ಸೃಷ್ಟಿಯಾಗಿತ್ತು. ಹಿಂದೆ ಲೇಖಕಿಯರು ಬರೆದ ಸಾಹಿತ್ಯವು ಧಾರವಾಹಿಗಳಾಗಿ, ಚಲನಚಿತ್ರಗಳಾಗಿ ಹಾಗೂ ಕಥೆಗಳು ಕಣ್ಣಮುಂದೆ ಅಚ್ಚಳಿಯದಂತಿದೆ ಎಂದರೆ ತಪ್ಪಾಗುವುದಿಲ್ಲ ಎಂದರು.
ಭಾರತದಾದ್ಯಂತ ಮಹಿಳೆಯರು ಅಡುಗೆ ಮನೆಯಿಂದ ಅಂತರಿಕ್ಷದವರೆಗೆ, ಕೃಷಿ ಭೂಮಿಯಿಂದ ಯುದ್ಧಭೂಮಿಯವರೆಗೆ ತಮ್ಮ ಸ್ಥಾನವನ್ನು ವಿಸ್ತರಿಸಿಕೊಂಡಿದ್ದಾರೆ. ಶಿಕ್ಷಕರಾಗಿ, ವಕೀಲರಾಗಿ, ನ್ಯಾಯಾಧೀಶರಾಗಿ ವೈದ್ಯರಾಗಿ, ಉಪರಾಷ್ಟ್ರಪತಿಗಳಾಗಿ, ಸಾಹಿತ್ಯ, ಸಂಗೀತ, ಕಲೆ ನಾಟಕ, ರಂಗಭೂಮಿ ಎಲ್ಲದರಲ್ಲೂ ಉನ್ನತ ಸ್ಥಾನಗಳನ್ನು ಅಲಂಕರಿಸಿ ಅಪಾರ ಸಾಧನೆ ಮಾಡುತ್ತಿದ್ದಾರೆ ಎಂದರು.
The Sahitya Sammelan should be a constant source of thought for women.
