ಚಿಕ್ಕಮಗಳೂರು: ಶೋಷಿತ ವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರಬೇಕೆಂಬ ಉದ್ದೇಶದೊಂದಿಗೆ ಸಂಕೀರ್ತನೆಗಳ ಮೂಲಕ ಕ್ರಾಂತಿ ಮಾಡಿ ಶ್ರಮಿಸಿದ ಮಹಾನ್ ಇತಿಹಾಸ ಪುರುಷ ಭಕ್ತ ಕನಕದಾಸರು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಬಣ್ಣಿಸಿದರು.
ಅವರು ಇಂದು ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸಾರಿಗೆ ನಿಗಮದ ನೌಕರರು ಏರ್ಪಡಿಸಿದ್ದ ೫೩೮ನೇ ಶ್ರೀ ಕನಕಜಯಂತಿ ಕನಕ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ತಲೆದೋರಿದ್ದ ಮೂಡನಂಬಿಕೆಗಳ ವಿರುದ್ಧ ಸೌಮ್ಯ, ಶಾಂತಿಯಿಂದ ಸಾಮಾಜಿಕ ಹೋರಾಟ ಮಾಡಲು ಅದ್ಭುತ ಸಾಹಿತಿಗಳಾಗಿ ಹೃದಯ ಬೆಸೆಯುವ ಸಂಕೀರ್ತನೆಗಳನ್ನು ರಚಿಸಿ, ಸಾಮಾಜಿಕ ಸಾಮರಸ್ಯವನ್ನು ಕನಕದಾಸರು ಕಾಪಾಡಿದ್ದಾರೆ ಎಂದರು.
೧೫೯೪ ರಲ್ಲಿ ಹಾವೇರಿ ಜಿಲ್ಲೆಯ ಬಾಡಾ ಗ್ರಾಮದಲ್ಲಿ ಜನಿಸಿದ ತಿಮ್ಮಪ್ಪ ನಾಯಕ ಅವರು ಮುಂದೆ ಕನಕದಾಸರಾಗಿ ಕಾಗಿನೆಲೆಯಲ್ಲಿ ವ್ಯವಸಾಯ ಮಾಡುತ್ತಿದ್ದಾಗ ಚಿನ್ನದ ಗಣಿ ಸಿಗುತ್ತದೆ. ಅದನ್ನು ಸ್ವಾರ್ಥಕ್ಕೆ ಬಳಸದೆ ದೇವಾಲಯ ನಿರ್ಮಿಸುವಲ್ಲಿ ಮುಂದಾಗಿದ್ದರು ಎಂದು ವಿವರಿಸಿದರು.
ಅಜ್ಞಾನದಿಂದ ಸುಜ್ಞಾನದ ಕಡೆ ಪ್ರಭಾವಿತರಾಗಿ ಮೋಹಿನಿ ತರಂಗಿಣಿಯಲ್ಲಿ ಕವಿತೆ, ಕವನ ರಚಿಸಿ ದಾಸ ಕೀರ್ತನೆಗಳ ಮೂಲಕ ಜಗತ್ತಿಗೆ ಭಕ್ತಿಯಿಂದ ದೇವರು ಒಲಿಯುತ್ತಾನೆ ಎಂಬುದನ್ನು ಕನಕದಾಸರು ತೋರಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ವಾಲ್ಮೀಕಿ ಮುಂತಾದ ಮಹಾನ್ ಪುರುಷರನ್ನು ಕೇವಲ ಒಂದು ಜಾತಿಗೆ, ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲಾ ವರ್ಗದ ಜನರು ಒಟ್ಟುಗೂಡಿ ಆಚರಿಸಿದಾಗ ಮಹಾನ್ ದಾರ್ಶನಿಕರ ಜಯಂತಿಗೆ ನಿಜ ಅರ್ಥ ಬರುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಭಕ್ತ ಕನಕದಾಸರ ಸಂಕೀರ್ತನೆಗಳ ಬಗ್ಗೆ ಸಂಸ್ಕೃತಿ, ಪರಂಪರೆ ನೆಲೆಯನ್ನು ಯುವಪೀಳಿಗೆಗೆ ಪರಿಚಯಿಸುವ ಅಗತ್ಯ ಇದೆ. ಕೇವಲ ಒಂದು ದಿನಕ್ಕೆ ಮಹಾನ್ ಪುರುಷರ ಜಯಂತಿಗಳು ಸೀಮಿತವಾಗದೆ ಪ್ರತೀ ಮನೆ ಮನದಲ್ಲಿ ಅಚರಣೆಗಳು ನಡೆಯುವಂತಾಗಬೇಕು ಎಂದು ತಿಳಿಸಿದರು.
ಅಜ್ಞಾನದಿಂದ ಸುಜ್ಞಾನದ ಕಡೆಗೆ ಹೋಗಬೇಕೆಂಬ ನಿಟ್ಟಿನಲ್ಲಿ ಕನಕದಾಸರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ದರ್ಶನ ಮಾಡಬೇಕು ಎಂಬ ಉದ್ದೇಶದೊಂದಿಗೆ ಮಠದಲ್ಲಿ ಮುಂದಾದಾಗ ಪುರೋಹಿತ ಶಾಹಿತಿಗಳು ತಡೆಯುತ್ತಾರೆ, ಆಗ ಕನಕದಾಸರು ಬಾಗಿಲನು ತೆರೆದು ದರುಶನವ ಕೊಡು ಹರಿಯೆ ಎಂಬ ಗೀತೆಯ ಮೂಲಕ ತನ್ನೆಡೆಗೆ ಶ್ರೀಕೃಷ್ಣನ ನೋಡಿದಾಗ ಅದೇ ಕನಕನ ಕಿಂಡಿಯಾಗಿ ಪ್ರಸಿದ್ಧಿಯಾಗಿದೆ ಎಂದರು.
ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಪಠ್ಯಗಳ ಮೂಲಕ ಜಾಗೃತಿ ಮೂಡಿಸಬೇಕು. ಇದು ಆದಾಗ ಎಲ್ಲರಲ್ಲೂ ಸಮಾನತೆಯ ಮನೋಭಾವ ಬರುತ್ತದೆ ಎಂದು ಹೇಳಿದರು. ಕೆಎಸ್‌ಆರ್‌ಟಿಸಿ ಯಲ್ಲಿ ಉದ್ಯೋಗದಲ್ಲಿರುವ ನೌಕರರು ಸಾರ್ವಜನಿಕರ ಪ್ರಾಣ ರಕ್ಷಣೆಯ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತು ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ಕನಕ ಸಮಿತಿ ಅಧ್ಯಕ್ಷ ಜಯಪ್ಪ ವಹಿಸಿದ್ದರು. ಘಟಕ ವ್ಯವಸ್ಥಾಪಕ ರವೀಶ್, ಉಪಾಧ್ಯಕ್ಷರಾದ ಸಿದ್ದೇಗೌಡ, ಕಾರ್ಯದರ್ಶಿ ಸುರೇಶ್, ಸಹ ಕಾರ್ಯದರ್ಶಿ ಬೀರೇಗೌಡ, ಖಜಾಂಚಿ ಚಂದ್ರಶೇಖರ್, ಸದಸ್ಯರುಗಳಾದ ವಸಂತ, ಪುಷೋತ್ತಮ, ರಘು, ಲೋಕೇಶ್, ದಿನೇಶ್, ಮೋಹನ್ ಗೌಡ ಸೇರಿದಂತೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಭಾಗವಹಿಸಿದ್ದರು.
They have worked hard to bring the oppressed to the forefront of society.
