ಬೆಂಗಳೂರು: ಸುಸ್ಥಿರ ಇಂಧನ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕವು ವಿಶ್ವದ ಗಮನ ಸೆಳೆದಿದೆ. ಸುಸ್ಥಿರ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದ್ದು, ಹಸಿರು ಇಂಧನದ ಭವಿಷ್ಯಕ್ಕೆ ಸ್ಪಷ್ಟ ಗುರಿ ಹೊಂದಿದೆ ಎಂದು ಕ್ರೆಡಲ್ ಅಧ್ಯಕ್ಷರೂ ಆಗಿರುವ ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದಾರೆ.
ಬೆಂಗಳೂರು ಅಂತಾರಾಷ್ಟೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ’ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್ಪೋ-2025’ರ ಐದನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, “ರಾಜ್ಯದಲ್ಲಿ ಸುಸ್ಥಿರ ಇಂಧನ ನೀತಿ ಇರುವುದರಿಂದಲೇ ನಮ್ಮ ಹಸಿರು ಇಂಧನದ ಭವಿಷ್ಯಕ್ಕೆ ಸ್ಪಷ್ಟ ಗುರಿ ಇದೆ,” ಎಂದರು.
“ನವೀಕರಿಸಬಹುದಾದ ಇಂಧನ ನೀತಿ 2022-27 ಸ್ಪಷ್ಟ ಗುರಿಯನ್ನು ನಮ್ಮ ಮುಂದಿರಿಸಿದೆ. ನಮ್ಮ ನೀತಿ ಸಂಶೋಧನೆ, ಬಂಡವಾಳ ಹೂಡಿಕೆ ಮತ್ತು ಒಳಗೊಳ್ಳುವ ಆರ್ಥಿಕ ಅಭಿವೃದ್ಧಿಯನ್ನು ಒಳಗೊಂಡಿರುವುದು ವಿಶೇಷ. ಇತ್ತಿಚೆಗೆ ಯಶಸ್ವಿಯಾಗಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ನವೀಕರಿಸಬಹುದಾದದ ಇಂಧನ ವಲಯದಲ್ಲಿ 4 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸಿರುವುದು ನಮ್ಮ ಸುಸ್ಥಿರ ಇಂಧನ ನೀತಿಯ ಫಲ,” ಎಂದು ತಿಳಿಸಿದರು.
“ಸುಸ್ಥಿರ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಸಾರಥಿಯಾಗಿ ಮುನ್ನಡೆಯುತ್ತಿದೆ. ನಮ್ಮ ನವೀಕರಿಸಬಹುದಾದದ ಇಂಧನ ನೀತಿಯು ಹಸಿರು ಇಂಧನ ಕ್ಷೇತ್ರದ ಸಾಮರ್ಥ್ಯ ವೃದ್ದಿ, ಸಂಶೋಧನೆ ಹಾಗೂ ಪರಿಸರ ವ್ಯವಸ್ಥೆಗೆ ಪೂರಕವಾಗಿದ್ದು, ದೇಶಕ್ಕೆ ಮಾದರಿಯಾಗಿದೆ,” ಎಂದು ತಿಳಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಸಮರ್ಥ ಮಾರ್ಗದರ್ಶನದಲ್ಲಿ ಕ್ರೆಡಲ್ ಅತ್ಯುತ್ತಮ ಸಾಧನೆ ಮಾಡಿದೆ. ರಾಜ್ಯವು 2024-25ನೇ ಸಾಲಿನಲ್ಲಿ ಪವನ ವಿದ್ಯುತ್ ಕ್ಷೇತ್ರಕ್ಕೆ 1331.48 ಮೆ.ವ್ಯಾ. ಸೇರ್ಪಡೆಗೊಳಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ,”ಎಂದರು.
“ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಹಿಂದೆ ಇಂಧನ ಸಚಿವರಾಗಿದ್ದಾಗ, ಪಾವಗಡ ಸೋಲಾರ್ ಪಾರ್ಕ್ ಮಾಡಿದ್ದು ಇತಿಹಾಸ. ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆ ಪಡೆದಿತ್ತು. ಈಗ ಈ ಸೋಲಾರ್ ಪಾರ್ಕ್‌ನ ವಿಸ್ತರಣೆ ಕಾರ್ಯ ನಮ್ಮ ಮುಂದಿದ್ದು, ಮತ್ತೆ ನಾವು ಮೊದಲ ಸ್ಥಾನಕ್ಕೆ ಏರುವ ಭರವಸೆ ನನಗಿದೆ,” ಎಂದರು.
3 ದಿನಗಳ ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್‌ಪೋವನ್ನು ರಾಮಕೃಷ್ಣ ಆಶ್ರಮದ ವೀರೇಶಾನಂದ ಶ್ರೀಗಳು, ಪರಮಾನಂದ ಶ್ರೀಗಳು ಉದ್ಘಾಟಿಸಿದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಕರ ಸಂಘದ ಸುರೇಂದ್ರ ಕುಮಾರ್, ಪ್ರೈಮ್ ಎನರ್ಜಿಯ ಉದ್ಯಮಿ ರಮೇಶ್ ಶಿವಣ್ಣ ಹಾಗೂ ಜೆಟ್ರೋ ಕಂಪನಿಯ ಜಪಾನ್ ಪ್ರತಿನಿಧಿ ತೊಷಿರೋ ಮಿಜುತಾನಿ ಉಪಸ್ಥಿತರಿದ್ದರು.
ಎಕ್ಸ್‌ಪೋದಲ್ಲಿ ಸೋಲಾರ್ ವಿದ್ಯುತ್, ಗ್ರಿಡ್ ಉನ್ನತೀಕರಣ, ಹಸಿರು ಇಂಧನ ಅಳವಡಿಕೆ ಸಂಬಂಧಿಸಿದಂತೆ ವಿಚಾರಗೊಷ್ಠಿಗಳು ನಡೆಯಲಿವೆ.
The state has a clear goal for its green energy future.
