July 14, 2025
Suddigaralive News
ರಾಜ್ಯ

ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ

ಹಾಸನ: ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವಿದ್ಯುತ್ ಪೂರೈಕೆ ಮಾಡುವಕುಸುಮ್-ಸಿ ಯೋಜನೆಯಡಿ ಈಗಾಗೇ 200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಇನ್ನು ಕೆಲವೇ ತಿಂಗಳಲ್ಲಿ 545 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ನಡೆಸಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕುಸುಮ್- ಸಿ ಯೋಜನೆಯಡಿ ಈಗಾಗಲೇ ಸುಮಾರು 200 ಮೆಗಾ ವ್ಯಾಟ್‌ ಸಾಮರ್ಥ್ಯದ ಸೋಲಾರ್ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ 93 ಸ್ಥಳಗಳಲ್ಲಿ 545 ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಘಟಕಗಳು ಚಾಲನೆಗೊಳ್ಳಲಿವೆ. ಇದರಿಂದ ರೈತರಿಗೆ ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸಲು ಹೆಚ್ಚಿನ ಅನುಕೂಲವಾಗಲಿದೆ,” ಎಂದರು.

“ನಮ್ಮ ಸರ್ಕಾರ ಕುಸುಮ್-ಸಿ ಯೋಜನೆಯಡಿ ಕೃಷಿ ಪಂಪ್ ಸೆಟ್‌ಗಳ ಫೀಡರ್ ಸೋಲರೈಸೇಷನ್ ಮೂಲಕ 2,400 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ ಹಾಕಿಕೊಂಡಿದೆ. ಇತ್ತೀಚೆಗೆ ಗೌರಿಬಿದನೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಸುಮ್-ಸಿ ಯೋಜನೆಯಡಿ ಸ್ಥಾಪಿಸಿರುವ ಸೋಲಾರ್ ವಿದ್ಯುತ್ ಘಟಕವನ್ನು ಉದ್ಘಾಟನೆ ಮಾಡಿದ್ದಾರೆ. ಫೀಡರ್ ಸೋಲರೈಸೇಷನ್ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ,” ಎಂದು ಹೇಳಿದರು.

“ಕುಸುಮ್-ಸಿ ಯೋಜನೆಯಡಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 4 ಎಕರೆ ಭೂಮಿ ಅಗತ್ಯವಿದೆ. ಸರ್ಕಾರಿ ಭೂಮಿ ಲಭ್ಯವಿದ್ದರೆ ಅದನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ. ಆದರೆ, ಆ ಭೂಮಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಅನ್ನು ಖಾಸಗಿ ವಿದ್ಯುತ್ ಉತ್ಪಾದಕರು ಪಾವತಿಸಬೇಕು. ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಬಳಿ ಇಟ್ಟು ಉಪ ಕೇಂದ್ರ ಇರುವ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಖಾಸಗಿ ಭೂಮಿಯಾಗಿದ್ದರೆ, ವಿದ್ಯುತ್ ಉತ್ಪಾದನೆ ಗುತ್ತಿಗೆ ಪಡೆದ ಡೆವಲಪರ್‌ಗಳು ಗುತ್ತಿಗೆಗೆ ತೆಗೆದುಕೊಂಡು, ಭೂಮಾಲೀಕರಿಗೆ ಎಕರೆಗೆ ಕನಿಷ್ಠ 25,000 ರೂ. ಪರಿಹಾರ ನೀಡುತ್ತಾರೆ,” ಎಂದು ತಿಳಿಸಿದರು.

“ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಇದ್ದ 4 ಲಕ್ಷ ಅಕ್ರಮ ಪಂಪ್ ಸೆಟ್ ಗಳ ಪೈಕಿ 3 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಫೀಡರ್ ಗಳಿದ 500 ಮೀಟರ್‌ ಒಳಗಿನ ಪಂಪ್‌ಸೆಟ್‌ಗಳಿಗೆ ಇಲಾಖೆಯೇ ಟ್ರಾನ್ಸ್‌ಫಾರ್ಮರ್‌ ಒದಗಿಸಲಿದೆ. 500 ಮೀಟರ್‌ ನಿಂದ ಹೊರಗಿನ ಪಂಪ್‌ ಸೆಟ್‌ಗಳಿಗೆ ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್‌ಗಳನ್ನು ಒದಗಿಸಲಾಗುತ್ತದೆ,” ಎಂದರು.

“ಇಲಾಖೆ ಅಧಿಕಾರಿಗಳು ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಅಲ್ಲದೇ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಜನಪ್ರತಿನಿಧಿಗಳ ಬಳಿಗೆ ನೀವೇ ತೆರಳಿ ಅವರಿಂದ ಸಲಹೆಗಳನ್ನು ಪಡೆದು ಕೆಲಸ ಮಾಡಬೇಕು. ಅದನ್ನು ಬಿಟ್ಟು ಇಲಾಖೆಗೆ ಕೆಟ್ಟ ಹೆಸರು ಬರುವಂತೆ ಮಾಡಬೇಡಿ. ಆಸಕ್ತಿ ಇಲ್ಲದೆ ಕೆಲಸ ಮಾಡುವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡುವ ಮೂಲಕ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ಹೇಳಿದರು.

ಇದಕ್ಕೂ ಮುನ್ನ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇಂಧನ ಇಲಾಖೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸಚಿವ ಕೆ.ಜೆ.ಜಾರ್ಜ್ ಅವರು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು. ಅಲ್ಲದೆ, ಜನಪ್ರತಿನಿಧಿಗಳ ಬಳಿ ತೆರಳಿ ಅವರ ಸಲಹೆ ಪಡೆದು ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್‌ ರಾಜು, “ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯಡಿ ಶೇ.99.86 ಪ್ರಗತಿ ಸಾಧಿಸಿದ್ದು, ಸರ್ಕಾರದಿಂದ ಈವರೆಗೂ 375.09 ಕೋಟಿ ರೂ. ಬಿಡುಗಡೆಯಾಗಿದೆ. ಗಂಗಾಕಲ್ಯಾಣ ಯೋಜನೆಯಲ್ಲಿ 1225 ಅರ್ಜಿಗಳು ಬಾಕಿ ಉಳಿದಿದೆ. ಜಿಲ್ಲೆಯಲ್ಲಿ 149031 ಐಪಿ ಸ್ಥಾವರಗಳಿದ್ದು, ವಿದ್ಯುತ್‌ ಮೂಲಸೌಕರ್ಯ ಕಲ್ಪಿಸಲು ಬಾಕಿ ಇರುವ 3658 ಕಾಮಗಾರಿಗಳನ್ನು 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು,”ಎಂದು ಮಾಹಿತಿ ನೀಡಿದರು.

ಅಲ್ಲದೇ, “ಕುಸುಮ್‌-ಬಿ ಯೋಜನೆಗೆ ಹಾಸನ ಜಿಲ್ಲೆಯಲ್ಲಿ ಒಟ್ಟು 1593 ಅರ್ಜಿಗಳ ನೋಂದಣಿಯಾಗಿದೆ. ತಾಲೂಕುವಾರು 38 ವಿದ್ಯುತ್‌ ವಿತರಣಾ ಕೇಂದ್ರಗಳಿದ್ದು, ಸೋಲಾರ್‌ ಮೂಲಕ 203.84 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುವುದು. ಜಿಲ್ಲೆಯಲ್ಲಿ ಮಳೆಯಿಂದಾಗಿ 1500ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, 18 ಟ್ರಾನ್ಸ್‌ಫಾರ್ಮರ್‌ಗಳು ಹಾಗೂ 33 ಕಿ.ಮೀ ವಿದ್ಯುತ್‌ ಮಾರ್ಗಗಳಿಗೆ ಹಾನಿ ಆಗಿದ್ದು, ಒಟ್ಟು 2.5 ಕೋಟಿ ರೂ. ನಷ್ಟವಾಗಿದೆ,” ಎಂದು ವಿವರಿಸಿದರು.

ಸಭೆಯಲ್ಲಿ ಸಂಸದ ಶ್ರೇಯಸ್‌ ಪಟೇಲ್‌, ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಶಾಸಕರಾದ ಎಂ.ಮಂಜು, ಸ್ವರೂಪ್, ಸಿ.ಎನ್. ಬಾಲಕೃಷ್ಣ, ಎಚ್‌.ಕೆ. ಸುರೇಶ್‌, ಎಸ್‌. ಮಂಜುನಾಥ್‌ (ಸಿಮೆಂಟ್‌ ಮಂಜು), ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮತ್ತಿತರರು ಪಾಲ್ಗೊಂಡಿದ್ದರು.

745 MW soon under Kusum-C project. Power generation

Related posts

ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ.ಲಯನ್ಸ್ ಕ್ಲಬ್ ಅಧ್ಯಕ್ಷ ಜಿ,ಎಂ,ಪ್ರಕಾಶ್ ಅಭಿಮತ

Manju Mc

Why you need a cheering squad in your fitness journey

admin

New York’s first women-only boxing club is here

admin

Leave a Comment

[t4b-ticker] [t4b-ticker]