ಬೆಂಗಳೂರು: ಸಚಿವ ಸಂಪುಟ ಪುನರ್ ರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳಿವು ನೀಡಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿ ಕೊಂಡಿದೆ. ನವೆಂಬರ್ ಅಂತ್ಯದೊಳಗೆ ಸಂಪುಟ ಪುನರ್ ರಚನೆ ಯಾಗಲಿದೆ ಎಂಬ ಮಾತು ಆ ಪಕ್ಷದ ವಲಯದಲ್ಲಿ ದಟ್ಟವಾಗುತ್ತಿದೆ.
ಈ ನಡುವೆ, ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿಯಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ಇದೇ 13ರಂದು ರಾತ್ರಿ ಔತಣಕೂಟ ಆಯೋಜಿಸಿದ್ದಾರೆ. ಈ ಔತಣಕೂಟದ ಕುರಿತು ಮುಖ್ಯಮಂತ್ರಿ ಸಚಿವಾಲಯದಿಂದ ಎಲ್ಲ ಸಚಿವರಿಗೆ ಸಂದೇಶ ರವಾನಿಸಲಾಗಿದೆ ಎಂದು ಗೊತ್ತಾಗಿದೆ.
ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಸಂಪುಟ ಪುನರ್‌ರಚನೆ ಮಾಡುವಂತೆ ಹೈಕಮಾಂಡ್ ಸೂಚಿಸಿದೆ. ಸಚಿವರ ಪೈಕಿ 10ರಿಂದ 15 ಮಂದಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದೆ.
ಸಚಿವರಾಗಿದ್ದ ಬಿ. ನಾಗೇಂದ್ರ ಮತ್ತು ಕೆ.ಎನ್. ರಾಜಣ್ಣ ಅವರ ರಾಜೀನಾಮೆ ಯಿಂದ ತೆರವಾಗಿರುವ ಸ್ಥಾನಗಳನ್ನು ಭರ್ತಿ ಮಾಡುವ ಜೊತೆಗೆ, ಹಾಲಿ ಕೆಲವು ಸಚಿವರನ್ನು ಕೈಬಿಟ್ಟು ಆಕಾಂಕ್ಷಿ ಗಳಿಗೆ ಸ್ಥಾನ ನೀಡಲು ಮುಖ್ಯಮಂತ್ರಿ ಕೂಡಾ ಒಲವು ಹೊಂದಿದ್ದಾರೆ. ಬುಧವಾರ ಈ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ನ. 14ರಂದು ಹೊರ ಬೀಳಲಿದೆ. ಡಿಸೆಂಬರ್ ತಿಂಗಳಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ. ಇದರ ನಡುವೆ ಸಂಪುಟ ಪುನರ್ ರಚನೆ ಯಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.
ಎಲ್ಲ ಸಚಿವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮುಂದಿನ ಹೆಜ್ಜೆ ಇಡಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ದೀಪಾವಳಿ ನೆಪದಲ್ಲಿ ಸಚಿವರನ್ನು ಔತಣ ಕೂಟಕ್ಕೆ ಆಹ್ವಾನಿಸಲಿರುವ ಮುಖ್ಯಮಂತ್ರಿ, ರಾಜ್ಯ ರಾಜಕೀಯ ವಿದ್ಯಮಾನಗಳೂ ಸೇರಿದಂತೆ ಎಲ್ಲ ವಿಚಾರಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ.
Cabinet reshuffle for November…?
