May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ರಸ್ತೆ ದುರಸ್ಥಿ ಮಾಡದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೀಗ

ಚಿಕ್ಕಮಗಳೂರು: ನಗರ ಸೇರಿ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಒಂದು ತಿಂಗಳಲ್ಲಿ ಸರಿಪಡಿಸದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಹೊಲದಗದ್ದೆ ಗಿರೀಶ್ ಎಚ್ಚರಿಸಿದ್ದಾರೆ.

ರಸ್ತೆಗಳ ಸ್ಥಿತಿ ಹಿಂದೆಂದೂ ಕಂಡರಿಯದಷ್ಟರ ಮಟ್ಟಿಗೆ ದುಸ್ಥಿತಿಗೆ ತಲುಪಿದೆ. ದುರಸ್ತಿಗೆ ಒತ್ತಾಯಿಸಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಮಳೆಯ ಸಬೂಬು ಹೇಳಿಕೊಂಡು ಕಾಲ ತಳ್ಳುತ್ತಿ ದ್ದಾರೆ. ಅಪಘಾತಗಳು ಸಂಭವಿಸಿ ಸಾವು, ನೋವುಗಳು ಉಂಟಾಗುತ್ತಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯ, ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಜಿಲ್ಲೆಗೆ ಪ್ರವಾಸಿಗರು ಬಂದು ಹೋಗುತ್ತಾರೆ. ಜಿಲ್ಲಾ ಕೇಂದ್ರ ಎಂದು ಹೇಳಿಕೊಳ್ಳಲು ನಾಚಿಕೆ ಪಡುವಷ್ಟು ರಸ್ತೆ ಹಾಳಾಗಿದೆ. ಪ್ರವಾಸಿಗರು  ಲೇವಡಿ ಮಾಡುವಂತಾಗಿದೆ. ಇಷ್ಟಾದರೂ ಸರ್ಕಾರ ಮುಜುಗರ  ಇಲ್ಲದಂತೆ ವರ್ತಿಸುತ್ತಿದೆ ಎಂದಿದ್ದಾರೆ.

ಶಾಸಕ ಎಚ್.ಡಿ.ತಮ್ಮಯ್ಯ ಅವರು ನಗರದ ರಸ್ತೆ ದುಸ್ಥಿತಿಗೆ ಹಿಂದಿನ ಸರ್ಕಾರದ ಅಮೃತ್ ಯೋಜನೆ, ಒಳಚರಂಡಿ ಯೋಜನೆಗಳು ಕಾರಣ ಎಂದು ಆರೋಪ ಮಾಡಿದ್ದರು. ಅದೇ ಯೋಜನೆಗಳನ್ನು ಜನರಿಗೆ ತೋರಿಸಿ ಗೆದ್ದು ಬಂದರು. ನಂತರ ಎರಡೂವರೆ ವರ್ಷ ಕಳೆದರೂ ಯಾವುದೂ ಸರಿಯಾಗಲಿಲ್ಲ ಎಂದು ದೂರಿದ್ದಾರೆ.

ಚಿಕ್ಕಮಗಳೂರು-ಮೂಡಿಗೆರೆ ರಸ್ತೆ, ಬಾಳೆಹೊನ್ನೂರು-ಮಲ್ಲಂದೂರು ರಸ್ತೆ ಸೇರಿ ಬಹುತೇಕ ಎಲ್ಲಾ ರಸ್ತೆಗಳು ಹಾಳಾಗಿವೆ. ಮಲ್ಲಂದೂರಿನಿಂದ ಚಿಕ್ಕಮಗಳೂರಿಗೆ 20ಕಿಲೋ ಮೀಟರ್ ದೂರ ಇದ್ದು, 25 ನಿಮಿಷದಲ್ಲಿ ಪ್ರಯಾಣಿಸಬಹುದಾಗಿತ್ತು. ಈಗ ಒಂದೂವರೆ ಗಂಟೆ ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ. ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಜನರ ಆಕ್ರೋಶದ ಕಟ್ಟೆ ಒಡೆಯುವ ಲಕ್ಷಣಗಳಿವೆ. ಸಬೂಬು ಹೇಳುವುದನ್ನು ಬಿಟ್ಟು ಒಂದು ತಿಂಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ನಾಗರಿಕರು ಒಟ್ಟಾಗಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಸಾಮಾನ್ಯ ಜನರಿಗೆ ಉದ್ಯೋಗ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ರೈತರಿಗೆ ಶಾಶ್ವತ ನೀರಾವರಿ ಯೋಜನೆ ನೀಡುತ್ತಿಲ್ಲ. ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೆ ಪಾಠ, ಪ್ರವಚನ ಸ್ಥಗಿತಗೊಂಡಿವೆ. ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದರೂ ಕೇಳುವವರಿಲ್ಲ. ಈ ಬಗ್ಗೆ ಶಾಸಕರು ಆಲೋಚನೆಯನ್ನೇ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

Public Works Department office locked if road not repaired

Related posts

ಜನತೆಯ ಅನುಕೂಲತೆಗೆ ಕೇಂದ್ರ ಯೋಜನೆ ಉಪಯುಕ್ತ

Team Suddigara

ಕಾಮಗಾರಿಗಳನ್ನು ಕೈಗೊಳ್ಳುವಾಗ ಗುಣ ಮಟ್ಟವನ್ನು ಕಾಯ್ದುಕೊಳ್ಳಿ

Team Suddigara

ಸರ್ವರೂ ಶಿಸ್ತನ್ನು ಅಳವಡಿಸಿಕೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣ

Team Suddigara

Leave a Comment