May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಪ್ರೇಕ್ಷಕರ ಮನಗೆದ್ದ ದಕ್ಷ ಯಜ್ಞ ಕಾಲಮಿತಿ ಯಕ್ಷಗಾನ

ಚಿಕ್ಕಮಗಳೂರು: ಯಕ್ಷಗಾನ ಅಭಿಮಾನಿ ಬಳಗ, ಸಾಂಸ್ಕೃತಿಕ ಸಂಘ ಮತ್ತು ಹವ್ಯಕ ಬಳಗದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಬಂಗಾರ ಮಕ್ಕಿಯ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಚಿಟ್ಟಾಣಿ ಬಳಗದಿಂದ ಭಾನುವಾರ ನಡೆದ ದಕ್ಷ ಯಜ್ಞ ಕಾಲಮಿತಿ ಯಕ್ಷಗಾನ ಪೌರಾಣಿಕ ಯುಗದ ವೈಭವವನ್ನು ಅನಾವರಣಗೊಳಿಸಿತು.

ಭಾಗವತರ ಕಂಚಿನ ಕಂಠದ ಗಾಯನ, ಅಬ್ಬರಿಸಿದ ಹಿಮ್ಮೇಳ, ಕಲಾವಿದರ ಪ್ರಾಸಬದ್ಧ ಚುರುಕು ಸಂಭಾಷಣೆ, ನವಿರು ಹಾಸ್ಯ, ಮಿಂಚಿನ ನೃತ್ಯ, ಅದ್ಭುತ ಅಭಿನಯ ನೋಡುಗರನ್ನು ೫ ಗಂಟೆಗಳ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ತನ್ನ ಸತಿಯನ್ನು ಅವಮಾನಗೊಳಿಸಿ ಆಕೆಯ ಸಾವಿಗೆ ಕಾರಣನಾದ ದಕ್ಷನನ್ನು, ಶಿವನು ವೀರಭದ್ರನನ್ನು ಸೃಷ್ಟಿಸಿ ಸಂಹರಿಸಿ ಆತನು ಮಾಡುತ್ತಿದ್ದ ದಕ್ಷ ಯಜ್ಞವನ್ನು ನಾಶಗೊಳಿಸಿದ ಕಥಾ ಹಂದರವನ್ನು ಹೊಂದಿರುವ ಪ್ರಸಂಗವನ್ನು ಪಾತ್ರಧಾರಿಗಳು ಪರಕಾಯ ಪ್ರವೇಶ ಮಾಡಿದವರಂತೆ ಅಭಿನಯಿಸುವ ಮೂಲಕ ಸಬಿಕರ ಮನ ಗೆದ್ದರು.

ದಕ್ಷನಾಗಿ ಸಂಜಯ ಬೆಳೆಯೂರು, ದಾಕ್ಷಾಯಣಿಯಾಗಿ ಯಲಗುಪ್ಪದ ಸುಬ್ರಹ್ಮಣ್ಯ ಹೆಗಡೆ, ಈಶ್ವರನಾಗಿ ಸುಬ್ರಹ್ಮಣ್ಯ ಚಿಟ್ಟಾಣಿ ಮನೋಜ್ಞ ಅಭಿನಯದ ಮೂಲಕ ನೋಡುಗರು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರೆ, ಚಪ್ಪರಮನೆ ಶ್ರೀಧರ ಹೆಗಡೆ ನವಿರು ಹಾಸ್ಯದ ಮೂಲಕ ಸಭಿಕರನ್ನು ರಂಜಿಸಿದರು.

ಭಾಗವತರಾಗಿ ಬ್ರಹ್ಮೂರು ಶಂಕರ ಭಟ್ಟ, ಮದ್ದಳೆಯಲ್ಲಿ ಹಂಡ್ರಮನೆ ನರಸಿಂಹ ಭಟ್ಟ, ಚಂಡೆಯಲ್ಲಿ ಹಳವಳ್ಳಿ ಗಣೇಶ ಗಾಂವ್ಕರ, ಅಗ್ನಿಯಾಗಿ ವಿನಾಯಕ ಗುಂಡ ಬಾಳ, ವೀರಭದ್ರನಾಗಿ ನಿರಂಜನ ಜಾಗನಳ್ಳಿ, ದೇವೇಂದ್ರನಾಗಿ ನಾಗೇಶ ಕುಳಿ ಮನೆ, ಬ್ರಾಹ್ಮಣತಿಯಾಗಿ ರಕ್ಷಿತಾ ಕುಳಿಮನೆ ಗಮನ ಸೆಳೆದರು.

೩೫ ವರ್ಷಗಳಿಂದ ನಿರಂತರವಾಗಿ ಕಲಾಸೇವೆ ಮಾಡುತ್ತಿರುವ ಕಲಾವಿದ ಯಲಗುಪ್ಪದ ಸುಬ್ರಹ್ಮಣ್ಯ ಹೆಗಡೆ ಅವರನ್ನು ಈ ವೇಳೆ ಯಕ್ಷಗಾನ ಅಭಿಮಾನಿ ಬಳಗ, ಸಾಂಸ್ಕೃತಿಕ ಸಂಘ ಮತ್ತು ಹವ್ಯಕ ಬಳಗದಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಹೆಗಡೆ, ಯಕ್ಷಗಾನದಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಿರುವುದರಿಂದ ಕನ್ನಡವನ್ನುಉಳಿಸಿ ಬೆಳೆಸಿದರೆ ಮಾತ್ರ ಯಕ್ಷಗಾನ ಉಳಿದು ಬೆಳೆಯುತ್ತದೆ ಎಂದರು

ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕನ್ನಡವನ್ನು ಪ್ರೀತಿಸಬೇಕು, ಉಳಿಸಿ ಬೆಳೆಸಬೇಕು, ಆ ಮೂಲಕ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ಮಾಡಿದರು. ಚಿಟ್ಟಾಣಿ ಬಳಗದ ಮುಖ್ಯಸ್ಥ ಸುಬ್ರಹ್ಮಣ್ಯ ಚಿಟ್ಟಾಣಿ ಮಾತನಾಡಿ ತಮ್ಮ ತಂದೆಯವರ ಹೆಸರಿನಲ್ಲಿ ಸಾರ್ವಜನಿಕ ಟ್ರಸ್ಟ್ ಒಂದನ್ನು ಸ್ಥಾಪಿಸುತ್ತಿದ್ದು ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಯಕ್ಷಗಾನ ಅಭಿಮಾನಿ ಬಳಗದ ಅಧ್ಯಕ್ಷ ಆನಂದ್ ಕುಮಾರ್ ಶೆಟ್ಟಿ, ಸಂಚಾಲಕ ಕೆ. ಎನ್. ಮಂಜುನಾಥ ಭಟ್, ಹವ್ಯಕ ಬಳಗದ ಅಧ್ಯಕ್ಷ ರಾಮಾ ಹಾಸ್ಯಗಾರ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಡಿ ಪಡುಬಿದ್ರಿ, ಗಜಾನನ ಹೆಗಡೆ, ವಿನೀತ್ ಕುಮಾರ್, ಗೋಪಾಲ ಕೃಷ್ಣ ಉಪಸ್ಥಿತರಿದ್ದರು.

Daksha Yajna Kalamiti Yakshagana won the hearts of the audience

Related posts

ರಾಜ್ಯದಲ್ಲಿ ಅನರ್ಹ 3.65 ಲಕ್ಷ ಕಾರ್ಡ್‌ ರದ್ದು

Team Suddigara

ದೇಶದಲ್ಲೇ ಕರ್ನಾಟಕ ನಂ.1 ಭ್ರಷ್ಟ ಸರ್ಕಾರ

Team Suddigara

 ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆ

Team Suddigara

Leave a Comment